Twitter Facebook Feed
ಆ ಭಗವಂತನಿಂದ ನಮಗೆ ದೈವದತ್ತವಾಗಿ ಬಂದಿರುವ ಈ ಸೃಷ್ಟಿಯಲ್ಲಿ ಅನೇಕ ಗಿಡಮೂಲಿಕೆಗಳಿವೆ. ಪ್ರಕೃತಿಯಲ್ಲಿ ಕೆಲವಂತೂ ತುಂಬಾ ಉಪಯುಕ್ತವಾದವು. ಗಿಡ,ಮರ,ಬೇರು,ಚೆಕ್ಕೆ,ಎಲೆ,ಹೂವು,ಕಾಯಿ,ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಕಾಳುಗಳು,ನಮ್ಮ ನಿತ್ಯ ಜೀವನದಲ್ಲಿ ಬಹಳವಾಗಿ ಬಳಸುತ್ತೇವೆ.ಅವುಗಳಲ್ಲಿ ಕೆಲವನ್ನೂ ಉಪಯೋಗಿಸುವ ರೀತಿ ಮತ್ತು ಮನೆಮದ್ದು ಮಾಡಿಕೊಂಡು ಅವೆಲ್ಲವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ತಿಳಿಯೋಣ.ಉಪಯುಕ್ತ ಮಾಹಿತಿ ಮತ್ತು ಮನೆಮದ್ದು ತಯಾರಿಸುವ ಈ ಸಿರಿಗಂಧ ಟಿಪ್ಸ್ ಬ್ಲಾಗ್ ಗೆ ಸುಸ್ವಾಗತ.
Showing posts with label KITCHEN / COOKING TIPS - ಅಡಿಗೆ ಮನೆಯ ಕೆಲವು ಉಪಯುಕ್ತ ಮಾಹಿತಿಗಳು. Show all posts
Showing posts with label KITCHEN / COOKING TIPS - ಅಡಿಗೆ ಮನೆಯ ಕೆಲವು ಉಪಯುಕ್ತ ಮಾಹಿತಿಗಳು. Show all posts

Radish - ಮೂಲಂಗಿ ಉಪಯೋಗಗಳು:


ಮೂಲಂಗಿ:

ಮೂಲಂಗಿಯಿಂದ ತುಂಬಾ ಉಪಯೋಗಗಳಿವೆ, ಇದನ್ನು ನಾನಾ ರೀತಿಯಾಗಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ್ ತಯಾರಿಸಬಹುದು, ಚಟ್ನಿಯೊಂದಿಗೆ ಜಜ್ಜಿ ಸೇರಿಸಿವುದರಿಂದ ಮೂಲಂಗಿ ಚಟ್ನಿ ತಯಾರಿ ಆಗುತ್ತದೆ. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ಮಾಡಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು.

- ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.

- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.

- ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.

- ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.

- ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.

- ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.

- ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.

- ದಿನನಿತ್ಯ ಸಲಾಡ್ ರೀತಿಯಲ್ಲಿ ಮೂಲಂಗಿಯನ್ನು ಸೇವಿಸಿ, ಇದರಿಂದ ತುಂಬಾ ಅನುಕೂಲಗಳಾಗುತ್ತವೆ. ಒಂದೇ ತರಹ ತಿನ್ನಲು ಬೇಸರ ಎನಿಸಿದರೆ, ಚಟ್ನಿಯೊಂದಿಗೆ ಬೆರೆಸಿ, ಮೂಲಂಗಿ ಚಟ್ನಿ  ಅಥವ ಮೂಲಂಗಿ ಪರೋಟ ತಯಾರಿಸಿ ತಿನ್ನಬಹುದು.
ಮೂಲಂಗಿ ಪರೋಟ ಮತ್ತು ಚಟ್ನಿ ರೆಸಿಪಿಯನ್ನು ಅಡಿಗೆ ರೆಸಿಪಿಯಲ್ಲಿ ನೋಡಬಹುದು.

Turmeric - ಅರಿಶಿಣ/ಅರಿಸಿನ:

ಅರಿಶಿಣ / ಅರಿಸಿನದ ಉಪಯೋಗಗಳು:

ಅರಿಶಿಣ / ಅರಿಷಿಣ / ಅರಿಶಿನ / ಅರಿಸಿನ / ಹಳದಿ - ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಆಗಾಗಿ ಎಲ್ಲ ಪದಗಳು ಬಳಕೆಯಲ್ಲಿವೆ.
                                    
                         

ಮ್ಮ ದೇಶದಲ್ಲಿ ಅರಿಶಿಣ ಮತ್ತು ಕುಂಕುಮಕ್ಕೆ ಒಂದು ಬಹಳ ಮಹತ್ತರವಾದ ಸ್ಥಾನವಿದೆ. ಇದು ಅಡಿಗೆಗಷ್ಟೇ ಸೀಮಿತವಾಗಿಲ್ಲ. ಅರಿಷಿಣಕ್ಕೆ ನಮ್ಮ ದೇಶದಲ್ಲಿ ಅದಕ್ಕಾಗಿಯೇ ಒಂದು ಪವಿತ್ರತೆಯನ್ನು ನೀಡಿದ್ದೇವೆ. ಅರಿಸಿನವನ್ನು ದೇವರಿಗೆ ಪೂಜಿಸಲು, ಬಾಗಿಲ ಹೊಸ್ತಿಲಿಗೆ ಇಡಲು, ಕುಂಕುಮಕ್ಕೆ ಕೊಡುವಾಗ ಮತ್ತು ಅಡಿಗೆಗೆ ಉಪಯೋಗಿಸುತ್ತೇವೆ. ಮುತ್ತೈದೆಯರು ಅದನ್ನು ಒಂದು ವರದಾನವೆಂದು ಉಪಯೋಗಿಸುವರು. ಅರಿಸಿಣ ಒಂದೇ ಈ ರೀತಿ ನಾನಾ ಬಗೆಯಲ್ಲಿ ಉಪಯೋಗಕ್ಕೆ ಬರುವುದು ಮತ್ತು ಅದನ್ನು ದಿನನಿತ್ಯ ಎಲ್ಲರೂ ಯಾವುದಕ್ಕಾದರೂ ಬಳಸಿಯೇ ಬಳಸುತ್ತಾರೆ.
ನಮ್ಮಗಳಿಗಂತೂ ಅರಿಶಿನ - ಕುಂಕುಮವಿಲ್ಲದೆ ಪೂಜೆ ಸಂಪೂರ್ಣವಾಗುವುದೇ ಇಲ್ಲ. ದೇವರ ಪೂಜೆಗಂತೂ ಹೂವಿಲ್ಲದಿದ್ದರೂ ಪರವಾಗಿಲ್ಲ. ಅರಿಷಿಣ- ಕುಂಕುಮವಂತೂ ಇರಲೇ ಬೇಕು. ಈಗಾಗಿ ಅರಿಶಿನವೂ ನಮ್ಮ ದಿನನಿತ್ಯದ ಅಡಿಗೆಯಲ್ಲಿ, ಪೂಜೆಯಲ್ಲಿ ಒಂದಾಗಿದೆ. ಮುತ್ತೈದೆಯರು ಪ್ರತಿದಿನ ಅದನ್ನು ಮಾಂಗಲ್ಯಕ್ಕೆ ಹಚ್ಚುವುದರಿಂದ ಶ್ರೇಯಸ್ಸು ಮತ್ತು ಒಳ್ಳೆಯದಾಗುವುದು. ಹೊಸಲಿಗೆ ಪ್ರತಿದಿನ ಇಡುವುದರಿಂದ ಕ್ರಿಮಿ-ಕೀಟಗಳ ಹತೋಟಿ ಇರುತ್ತದೆ ಮತ್ತು ಶುಭ ಸಂಕೇತವೂ ಆಗಿದೆ. ನಮ್ಮ ಬೆಳಗಿನ ಕೆಲಸಗಳು ಪ್ರಾರಂಭವಾಗುವುದೆ ಅರಿಸಿನದಿಂದ. ಒಳ್ಳೆಯ ಶುಭಕಾರ್ಯಗಳಿಗೂ ಸಹ ಅರಿಶಿನಕ್ಕೆ ಅದರದ್ದೇ ಆದ ಮಹತ್ವವಿದೆ. ಎಲ್ಲಾ ಶುಭ ಸಂದರ್ಭದಲ್ಲೂ ಇದನ್ನು ಬಳಸುತ್ತೇವೆ.
ಅರಿಶಿಣದ ಕೊಂಬು ಚಿನ್ನದ ಮಾಂಗಲ್ಯಕ್ಕೆ ಸಮಾನವಾಗಿದೆ, ಕೆಲವರು ಅರಿಷಿಣದ ಕೊಂಬನ್ನೆ ಮದುವೆಯಲ್ಲಿ ಮಾಂಗಲ್ಯವಾಗಿ ಉಪಯೋಗಿಸುವರು. ಆಗಾಗಿ ಇದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಮತ್ತು ಕಟ್ಟಲಾರದ ಬೆಲೆ ಇದೆ. ಅರಿಶಿನದ ದಾರ ಹೀಗೆ ಇದು ಹಲವಾರು ಬಗೆಯಲ್ಲಿ ಬಳಸಲು ಅನುಕೂಲವಾಗಿದೆ.


೧.ಅರಿಸಿನವನ್ನು ಹಾಲಿನ ಕೆನೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ, ಮುಖದಲ್ಲಿನ ಗುಳ್ಳೆಗಳು ಕಮ್ಮಿಯಾಗುತ್ತವೆ ಮತ್ತು ಹೊಳಪು ಬರುತ್ತದೆ.

೨.ಅರಿಸಿನದ ಪುಡಿಯನ್ನು ಕಡಲೆಹಿಟ್ಟಿಗೆ ಬೆರೆಸಿ,ಹಾಲಿನೊಂದಿಗೆ ಕಲೆಸಿ ಸಹ ಮುಖಕ್ಕೆ ಹಚ್ಚಬಹುದು.

೩.ಅರಿಶಿನದ ಪುಡಿಯನ್ನು ಸ್ವಲ್ಪ ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ.

೪.ಇದು ಆಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡಿಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ.

೫.ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿಣದ ಪುಡಿಯನ್ನು ಗಾಯದ ಮೇಲೆ ಹಾಕಿ ಅದುವುದರಿಂದ ರಕ್ತ ಬರುವುದು ನಿಲ್ಲುತ್ತದೆ. (ಚಿಕ್ಕ ಗಾಯಗಳಿಗೆ) ಆಂಟಿಸೆಪ್ಟಿಕ್ ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.
೬.ಅರಿಶಿಣದ ಕೊಂಬನ್ನು ಹಾಲಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಗುಳ್ಳೆಗಳು ಇಲ್ಲವಾಗುತ್ತವೆ ಮತ್ತು ಮುಖವು ಹೊಳಪು ಬರುತ್ತದೆ. ಇದು ಅರಿಷಿಣದ ಪುಡಿಯಲ್ಲಿ ಕಲೆಸಿ ಹಚ್ಚುವುದಕ್ಕಿಂತ ತುಂಬಾ ಉತ್ತಮವಾದದ್ದು. ಅಂಗಡಿಯಲ್ಲಿ ತಂದ ರೆಡಿಮೇಡ್ ಪುಡಿ ಉಪಯೋಗಿಸುವುದರಿಂದ ಹೆಚ್ಚು ಅನುಕೂಲ ದೊರೆಯದು, ಅದರಲ್ಲಿ ಕೆಲವು ಬಣ್ಣ ಮಿಶ್ರಿತವಾಗಿರುತ್ತವೆ. ಆದ್ದರಿಂದ ತೇದು ಹಚ್ಚುವುದರಿಂದ ಸ್ವಚ್ಛವಾದ ಅರಿಸಿನ ಸಿಗುತ್ತದೆ.

COOKING / KITCHEN TIPS - ಅಡಿಗೆ ಮನೆಯ ಕೆಲವು ಉಪಯುಕ್ತ ಮಾಹಿತಿಗಳು:

ಅಡಿಗೆ ಮನೆಯ ಕೆಲವು ಉಪಯುಕ್ತ ಮಾಹಿತಿಗಳು:

* ಅಡಿಗೆ ತಯಾರಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಮಧ್ಯದಲ್ಲಿ ಫೋನ್ ಅಥವ ಬಾಗಿಲುಗಳನ್ನು ಮುಟ್ಟಿ ಬಂದಿದ್ದರೆ, ಕೈಗಳನ್ನು ತೊಳೆದುಕೊಂಡು ಅಡಿಗೆ ಮುಂದುವರಿಸಿ, ಇಲ್ಲವೆಂದರೆ ಫುಡ್ ಪಾಯಿಸನ್ ಆಗುತ್ತದೆ.
* ತರಕಾರಿಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿ, ಉಪಯೋಗಿಸಿ.
* ಹಣ್ಣುಗಳನ್ನು ಕೂಡ ತೊಳೆದು ತಿನ್ನಿ.
* ಸೊಪ್ಪುಗಳನ್ನು ಐದರಿಂದ ಆರುಬಾರಿಯಾದರೂ ತೊಳೆಯಿರಿ, ನೀರಿನಲ್ಲಿ ನೆನಸುವಾಗ ಅದಕ್ಕೆ ಸ್ವಲ್ಪ ವಿನಿಗರ್ ಮತ್ತು ಉಪ್ಪನ್ನು ಹಾಕಿ ತೊಳೆಯುವುದರಿಂದ ಅದರಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ ಮತ್ತು ತಾಜಾ ಸಹ ಆಗುತ್ತದೆ.
* ಕಾಳು - ದಿನಸಿಗಳಿಗೆ ಹುಳ ಹಿಡಿಯದಂತೆ ಡಬ್ಬಕ್ಕೆ ಲವಂಗ ಹಾಕಿಡಿ. ಕೆಲವನ್ನು ರೆಫ್ರಿಜರೇಟರ್ ನಲ್ಲಿ ಇಡಿ.
* ಸಕ್ಕರೆಗೆ ಇರುವೆ ಬಂದರೆ ಲವಂಗ ಹಾಕಿಡಿ.
* ಅಕ್ಕಿಯನ್ನು ಇಡುವ ಜಾಗದಲ್ಲಿ ಬೇವಿನ ಎಲೆ / ಲವಂಗ / ಒಣ ಮೆಣಸಿನಕಾಯಿ / ಈರುಳ್ಳಿ ಇಟ್ಟರೆ ಅಲ್ಲಿ ಅಕ್ಕಿಯೂ ಹುಳ ಬರುವುದಿಲ್ಲ. ಅಕ್ಕಿ ಡಬ್ಬಕ್ಕೆ ಮೇಲ್ಭಾಗ ಮತ್ತು ಮುಚ್ಚಳಕ್ಕೆ ಎಣ್ಣೆ ಹಚ್ಚಿ ಇಟ್ಟರೆ ಅದರಲ್ಲಿ ಹುಳ ಇದ್ದರೆ ಅದು ಮೇಲೆ ಬರದಂತೆ ಹುಳುಗಳು ಅಲ್ಲೆ ಇರುತ್ತವೆ. ಇಲ್ಲವೆಂದರೆ ಎಲ್ಲಾ ಕಡೆಯೂ ಹುಳ ಹರಡಿಕೊಳ್ಳುತ್ತವೆ.
* ಅನ್ನ ಮಾಡುವಾಗ ನಿಂಬೆರಸ ಮತ್ತು ಎಣ್ಣೆ ಹಾಕಿದರೆ ಅನ್ನ ಉದುರು-ಉದುರಾಗುತ್ತದೆ.
* ಸಾರಿಗೆ ಉಪ್ಪು ಜಾಸ್ತಿ ಆದರೆ ಅದಕ್ಕೆ ಆಲೂಗೆಡ್ಡೆ ಯನ್ನು ಅರ್ಧಕ್ಕೆ ಕತ್ತರಿಸಿ ಹಾಕಿ ಎರಡು ನಿಮಿಷ ಕುದಿಸಿ,ತೆಗೆಯಿರಿ.ಆಲೂಗೆಡ್ಡೆಯೂ ಉಪ್ಪನ್ನು ಹೀರಿಕೊಂಡಿರುತ್ತದೆ. ಅಥವಾ ಅನ್ನದ ಸಣ್ಣ ಉಂಡೆಯನ್ನು ಮಾಡಿಕೊಂಡು ಅದನ್ನು ಸಾರಿಗೆ ತೇಲಿಬಿಟ್ಟು ಸ್ವಲ್ಪ ಹೊತ್ತಾದ ಮೇಲೆ ಅನ್ನ ಬಿಟ್ಟುಕೊಳ್ಳದಂತೆ ಉಂಡೆ ತೆಗೆದು ಹಾಕಿ, ಅದು ಉಪ್ಪನ್ನು ಹೀರಿಕೊಂಡಿರುತ್ತದೆ. ಇಲ್ಲವೆಂದರೆ ಸಾರಿಗೆ ನಿಂಬೆರಸ ಮತ್ತು ಸ್ವಲ್ಪ ನೀರು ಸೇರಿಸಿ, ನಿಂಬೆರಸದಿಂದ ರುಚಿಯೂ ಹೆಚ್ಚುತ್ತದೆ.
* ಮೊಟ್ಟೆಯನ್ನು ಬೇಯಿಸುವಾಗ ಆ ನೀರಿಗೆ ಸ್ವಲ್ಪ ವಿನಿಗರ್ ಮತ್ತು ಉಪ್ಪು ಹಾಕಿ ಬೇಯಿಸಿದರೆ, ಮೊಟ್ಟೆಗಳು ಹೊಡೆದು ಕೊಳ್ಳದೆ ಚೆನ್ನಾಗಿ ಬೇಯುತ್ತವೆ ಹಾಗೂ ರುಚಿಯೂ ಚೆನ್ನಾಗಿರುತ್ತದೆ.
* ಮೊಟ್ಟೆಯ ಆಮ್ಲೆಟ್ ತಯಾರಿಸುವಾಗ, ಅದಕ್ಕೆ ಒಂದೆರಡು ಚಮಚ ಹಾಲು ಸೇರಿಸಿ, ಬೀಟ್ ಮಾಡಿದರೆ ಆಮ್ಲೆಟ್ ರುಚಿ ಮತ್ತು ಸ್ಪಾಂಜಿ ತರಹ ಬರುತ್ತದೆ.
* ಆಮ್ಲೆಟ್ ಗೆ ಈರುಳ್ಳಿ ಜೊತೆ ಟಮೋಟ ಕೂಡ ಹಾಕಿ ತಯಾರಿಸಿ, ರುಚಿ ಹೆಚ್ಚುತ್ತದೆ.
* ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಅನ್ನು ಮೊದಲೆ ತಯಾರಿಸಿ ಇಟ್ಟುಕೊಂಡಿದ್ದರೆ, ಅಡಿಗೆ ತಯಾರಿಸುವಾಗ ಸುಲಭವಾಗಿ ಬಳಸಬಹುದು.
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ ತಯಾರಿಸುವಾಗ ಅದಕ್ಕೆ ಸ್ವಲ್ಪ ಉಪ್ಪು, ವಿನಿಗರ್ ಮತ್ತು ಸಿಟ್ರಿಕ್ ಆಸಿಡ್ ಹಾಕಿ ರುಬ್ಬಿ ಇಟ್ಟುಕೊಳ್ಳಿ, ಫ್ರೆಶ್ ಆಗಿರುತ್ತದೆ.
* ಬೆಂಡೆಕಾಯಿಯ ತುಂಡುಗಳನ್ನು ಬಾಣಲೆಯಲ್ಲಿ ಹುರಿಯುವಾಗ ಅದಕ್ಕೆ ಒಂದೆರಡು ಚಮಚ ವಿನಿಗರ್ ಅಥವಾ ನಿಂಬೆರಸ ಸೇರಿಸಿ ಹುರಿಯಿರಿ, ಬೇಗ ಲೋಳೆ ಬಿಡುತ್ತದೆ. ಕಾಯಿಗಳು ಚೆನ್ನಾಗಿ ಹುರಿದು ಕೊಳ್ಳುತ್ತವೆ.
* ಸೊಪ್ಪು ಅಥವಾ ತರಕಾರಿಗಳನ್ನು ಸ್ಟೋರ್ ಮಾಡುವಾಗ ಅದಕ್ಕೆ ಪೇಪರ್ ಹಾಕಿ ಕವರ್ ನಲ್ಲಿ ಇಡುವುದರಿಂದ, ನೀರನ್ನು ಹೀರಿಕೊಳ್ಳುತ್ತದೆ. ಬೇಗ ಹಾಳಾಗುವುದಿಲ್ಲ.
* ತರಕಾರಿಗಳನ್ನು ತುಂಬಾ ಬೇಯಿಸದಿರಿ, ಹೆಚ್ಚಾಗಿ ಬೇಯಿಸಿದರೆ ಅದರಲ್ಲಿರುವ ಪೌಷ್ಠಿಕಾಂಶಗಳು ಹಾಳಾಗುತ್ತವೆ.
* ಸೊಪ್ಪುಗಳ ಪಲ್ಯ ಮಾಡುವಾಗಲು ಅಷ್ಟೇ ಅದಕ್ಕೆ ಹೆಚ್ಚು ನೀರು ಸೇರಿಸದೆ, ಅದರಲ್ಲಿಯೇ ಇರುವ ನೀರಿನಲ್ಲಿ , ಮುಚ್ಚಳ ಮುಚ್ಚಿ ಬೇಯಿಸಿ, ಸ್ವಲ್ಪ ಉಪ್ಪು ಬೆರೆಸಿ, ಅದರಲ್ಲಿಯೇ ಸೊಪ್ಪು ಬೇಯುತ್ತದೆ. ತುಂಬಾ ಬೇಯಿಸಬೇಡಿ. ಸೊಪ್ಪನ್ನು ಹೆಚ್ಚಿಟ್ಟು ತೊಳೆಯದಿರಿ, ಮೊದಲೆ ಚೆನ್ನಾಗಿ ಶುಚಿಗೊಳಿಸಿ,ಉಪ್ಪು ಮತ್ತು ವಿನಿಗರ್ ಹಾಕಿ ನೆನೆಸಿ,ಸುಮಾರು ಸಾರಿ ತೊಳೆದು,ಆಮೇಲೆ ಹೆಚ್ಚಿ.
* ಮಸಾಲೆ ಸಾರುಗಳನ್ನು ಮಾಡುವಾಗ ಈರುಳ್ಳಿ,ಚೆಕ್ಕೆ,ಲವಂಗ,ಮೊಗ್ಗು,ಮೆಣಸು,ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಚಮಚ ಎಣ್ಣೆಯೊಂದಿಗೆ ಹುರಿದು ಮಸಾಲೆಯನ್ನು ತಯಾರಿಸಿ.
* ಮಸಾಲೆ ಜಾಸ್ತಿ ರುಬ್ಬಿಕೊಂಡು ಅದರಲ್ಲಿ ಎಷ್ಟು ಬೇಕೋ ಅಷ್ಟನ್ನು ತೆಗೆದು ಫ್ರಿಡ್ಜ್ ನಲ್ಲಿ ಇಟ್ಟು ಅದನ್ನು ಸಾಗು / ಮಸಾಲೆ ಗಳಿಗೆ ಉಪಯೋಗಿಸಬಹುದು.
* ಬದನೆಕಾಯಿ ಮತ್ತು ಬಾಳೆಕಾಯಿಗಳನ್ನು ಹೆಚ್ಚಿದ ನಂತರ ಅಂಟು ಅಂಟಾಗುತ್ತವೆ, ಹಾಗೂ ಕಪ್ಪಾಗುತ್ತವೆ, ಅದಕ್ಕೆ ಅದನ್ನು ನೀರಿನಲ್ಲಿ ಹಾಕಿಡಿ. ನೀರಿನ ಜೊತೆ ರಾಗಿಹಿಟ್ಟು / ಅರಿಶಿಣ / ವಿನಿಗರ್ / ನಿಂಬೆರಸ ಹಾಕಿ ಅದರಲ್ಲಿ ಹಾಕಿದರೆ ಇನ್ನೂ ಒಳ್ಳೆಯದು.
* ಅಡಿಗೆ ತಯಾರಿಸುವಾಗ ಸೌಟ್ ಗಳನ್ನು ಉದ್ದ ಹ್ಯಾಂಡಲ್ ಇರುವಂತವುಗಳನ್ನೆ ಉಪಯೋಗಿಸಿ,ಆಗ ಕೈಗಳಿಗೆ ತೊಂದರೆಯಾಗುವುದಿಲ್ಲ.
* ತುಪ್ಪ ಹಾಕುವ ಡಬ್ಬಿಗೆ ತಳದಲ್ಲಿ ಒಂದು ಚೂರು ಬೆಲ್ಲದ ತುಂಡು ಹಾಕಿ ಅದರ ಮೇಲೆ ತುಪ್ಪ ಹಾಕಿ ಇಟ್ಟರೆ ತುಪ್ಪ ಗುನುಗು ಬರದೆ ಫ್ರೆಶ್ ಆಗಿರುತ್ತದೆ.
* ಒಗ್ಗರಣೆಗೆ ಕರಿಬೇವು ಬಳಸುವಾಗ ಅದನ್ನು ಕೈನಲ್ಲಿ ತುಂಡುಮಾಡಿ ಹಾಕಿದರೆ, ಪರಿಮಳ ಹೆಚ್ಚುತ್ತದೆ.
* ಚಪಾತಿ ಹಿಟ್ಟು ಕಲೆಸುವಾಗ ಅದಕ್ಕೆ ಸ್ವಲ್ಪ ಹಾಲು ಮತ್ತು ವೆಜೆಟಬಲ್ ತುಪ್ಪ ಹಾಕಿ ಕಲೆಸಿದರೆ ಚಪಾತಿ ರುಚಿ ಮತ್ತು ಮೃದುವಾಗಿರುತ್ತವೆ.
* ರೊಟ್ಟಿ ಹಿಟ್ಟು ಕಲೆಸುವಾಗ ತಣ್ಣೀರಿನ ಬದಲು ಬಿಸಿ ನೀರು ಹಾಕಿ ಕಲೆಸಿದರೆ, ಚೆನ್ನಾಗಿ ಬರುತ್ತವೆ.
* ಹೋಳಿಗೆಗೆ ಕಣಕ ಹಿಟ್ಟು ಕಲೆಸುವಾಗ, ಅದಕ್ಕೆ ಸ್ವಲ್ಪ ಹಾಲು, ಚಿಟಿಕೆ ಅರಿಶಿಣ, ಚಿಟಿಕೆ ಉಪ್ಪು, ಸ್ವಲ್ಪ ಸಕ್ಕರೆ ಮತ್ತು ಒಂದೆರಡು ಚಮಚ ಅಕ್ಕಿಹಿಟ್ಟು ಮತ್ತು ಚಿರೋಟಿರವೆ ಹಾಕಿ ಎಲ್ಲಾ ಚೆನ್ನಾಗಿ ಬೆರೆಸಿ, ಕಲೆಸಿದರೆ, ಹೋಳಿಗೆಗಳು ಚೆನ್ನಾಗಿ ಬರುತ್ತದೆ ಹಾಗೂ ಬದಿಗಳು(ಎಡ್ಜ್) ಗಟ್ಟಿಯಾಗುವುದಿಲ್ಲ.
* ಮಸಾಲೆ ಅಥವಾ ಖಾರ ರುಬ್ಬುವಾಗಲೆ ಟಮೋಟೋ ಹಣ್ಣನ್ನು ಕೂಡ ಹಾಕಿ ರುಬ್ಬಿ ಇದರಿಂದ ರುಚಿ ಮತ್ತು ಬಣ್ಣ ಬರುತ್ತದೆ.
* ಚಟ್ನಿ ತಯಾರಿಸಿದಾಗ ತುಂಬಾ ಕಾರವಾದರೆ ನಿಂಬೆರಸ ಹಾಕಿ, ಬೆರೆಸಿ , ಚಟ್ನಿ ರುಚಿಯೊಂದಿಗೆ, ಕಾರ ಸಹ ಕಮ್ಮಿಯಾಗುತ್ತದೆ. ಕಾರ ಕಮ್ಮಿ ಆಗಲಿ ಅಂತನೆ ಅಲ್ಲದೆ ಯಾವ ಚಟ್ನಿ ತಯಾರಿಸಿದಾಗಲೂ ನಿಂಬೆರಸ ಹಾಕಿ, ತುಂಬಾ ಟೇಸ್ಟ್ ಇರುತ್ತದೆ ಚಟ್ನಿ.

-- ಅಡಿಗೆಗಾಗಿ ಸುಮಾರು ಟಿಪ್ಸ್ ಇದೆ, ಒಂದೊಂದಾಗಿ ತಿಳಿಯೋಣ.

NELLIKAAYI / AMLA / GOOSEBERRY- ನೆಲ್ಲಿಕಾಯಿ:


ನೆಲ್ಲಿಕಾಯಿ:

೧.ಪಪ್ಪಾಯ ಹಣ್ಣಿಗೆ ನೆಲ್ಲಿಕಾಯಿ ಚಚ್ಚಿದ್ದು ಹಾಕಿ, ಅದಕ್ಕೆ ಬೇಕಾದರೆ ಸಕ್ಕರೆ ಹಾಕಿ ಸೇವನೆ ಮಾಡಿದರೆ ಕಣ್ಣಿಗೆ ಒಳ್ಳೆಯದು. ಇದರಿಂದ ಕಣ್ಣಿಗೆ ಬಲ ಮತ್ತು ಶಕ್ತಿ ಬರುತ್ತದೆ. ಕಣ್ಣುರಿ, ಮಂದದೃಷ್ಠಿ, ಕಣ್ಣಲ್ಲಿ ನೀರು ಬರುವುದು, ಕಣ್ಣಿನ ಆಯಾಸಕ್ಕೆ ಇದು ಒಳ್ಳೆಯ ಮದ್ದು.

೨.ನೆಲ್ಲಿಕಾಯಿ ಕಷಾಯದಲ್ಲಿ ಕೂದಲು ನೆನೆಸಿ, ತೊಳೆದರೆ,ಕೂದಲು ಉದ್ದ ಮತ್ತು ಹೊಳಪಾಗುತ್ತದೆ.
೩.ನೆಲ್ಲಿಕಾಯಿ ಪೇಸ್ಟ್ ನ್ನು ಬಿಸಿನೀರಿಗೆ ಹಾಕಿ, ತಲೆ ಬುಡಕ್ಕೆ ಹಚ್ಚಿ, ನೆನಯಲು ಬಿಟ್ಟು, ನಂತರ ತೊಳೆದು ಕೊಂಡರೆ ಸಹ ಒಳ್ಳೆಯ ಪರಿಣಾಮ ಬೀರುತ್ತದೆ.
Related Posts Plugin for WordPress, Blogger...

ಮನೆಮದ್ದು ಮತ್ತು ಉಪಯೋಗಗಳು Headline

ಮನೆಮದ್ದು ಮತ್ತು ಉಪಯೋಗಗಳು # HOME REMEDIES AND USEFUL TIPS